ರಾಷ್ಟ್ರೀಯ ಪ್ರಥಮ ಮಹಿಳಾ ಸಮಾವೇಶ ಸಮಾರೋಪ
.
ಎರಡು ದಿನಗಳ ಕಾಲ ನಾಗನೂರು ರುದ್ರಾಕ್ಷಿ ಮಠದ ಆರ್ ಎನ್ ಶೆಟ್ಟಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪ್ರಥಮ ಮಹಿಳಾ ಸಮಾವೇಶ ಅತ್ಯಂತ ಯಶಸ್ವಿಯತವಾಗಿ ಸಮಾರೋಪಗೊಂಡಿತು.
ರಾಷ್ಟ್ರೀಯ ಪ್ರಥಮ ಮಹಿಳಾ ಸಮಾವೇಶದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಮಾವೇಶದ ಸರ್ವಧ್ಯಕ್ಷೆ ಕೂಡಲಸಂಗಮ ಬಸವ ಧರ್ಮಪೀಠದ ಜಗದ್ಗುರು ಡಾ. ಗಂಗಾ ಮಾತಾಜಿ ಅವರು ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಪಡೆಯಲು ನಾವೆಲ್ಲರೂ ಇನ್ನೂ ಹೆಚ್ಚಿನ ಮಟ್ಟದಲ್ಲಿ ಹೋರಾಟ ಮುಂದುವರೆಸುವ ಅನಿವಾರ್ಯತೆ ಇದೆ. ಸಮಾಜ ಈಗ ಜಾಗೃತವಾಗಿದ್ದು, ಸರ್ಕಾರ ಸಹ ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದರು.
ಸಮಾರೋಪ ನುಡಿಗಳನ್ನಾಡಿದ ತರಳಬಾಳು ಜಗದ್ಗುರು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ 12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ತಂದುಕೊಟ್ಟ ಸಮಾನತೆಯನ್ನು ಮುಂದುವರೆಸಿಕೊಂಡು ಹೋಗುವಲ್ಲಿ ನಾವು ವಿಫಲರಾಗಿದ್ದೇವೆ. ವೈಚಾರಿಕವಾಗಿ ಬೌದ್ಧಿಕವಾಗಿ ಉನ್ನತ ಸ್ಥಾನದಲ್ಲಿ ಇರುವ ಆಧುನಿಕ ಮಹಿಳೆಯರು ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ಛಲದಿಂದ ಮುಂದುವರರಯುತ್ತಾ
ಕಾಡುವ, ಬೇಡುವ, ಪೀಡಿಸುವ ದೇವರನ್ನು ಮೂಲೆಗುಂಪು ಮಾಡಬೇಕು ಎಂದರು. ಬೇಕು ಬೇಕು ಎನ್ನುವ ದಾಹವನ್ನು ತೊರೆದು ಸಾಕು ಸಾಕು ಅನ್ನುವ ಸಂತೃಪ್ತ ಭಾವವನ್ನು ಹೊಂದಬೇಕು ಎಂದು ಕಿವಿಮಾತು ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಬಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ ಮಹಿಳೆಯರ ಬಗ್ಗೆ ಸಮಾಜದಲ್ಲಿದ್ದ ಕೀಳರಿಮೆಯನ್ನು ಹೋಗಲಾಡಿಸಿ ಶರಣರು ಮಹಿಳೆಯರನ್ನು ಮುನ್ನೆಲೆಗೆ ತಂದದ್ದು ಆಧುನಿಕವಾಗಿ ಅವರು ಸಾಧನೆ ಮಾಡಲು ಸಹಕಾರಿಯಾಗಿದೆ ಎಂದರು.
ಸಮಾರಂಭದ ನೇತೃತ್ವ ನುಡಿಗಳನ್ನು ಆಡಿದ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ ಮಾತನಾಡಿ ಶಿವಯೋಗ, ಲಿಂಗಾಯತ ಧರ್ಮದ ಆತ್ಮವಿದ್ದಂತೆ ಎಂದು ತಿಳಿಸುತ್ತಾ ಸಮಾವೇಶದಲ್ಲಿ ಉಪಸ್ಥಿತರಿದ್ದ ಮಹಿಳೆಯರಲ್ಲಿನ ಬಸವ ತತ್ವದ ಬೆಳಕನ್ನು ಕಂಡು ಹರ್ಷ ವ್ಯಕ್ತಪಡಿಸಿದರು.
ಇಳಕಲ್ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಮಹಾ ಸ್ವಾಮೀಜಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ಬಸವ ಶ್ರೀ ಪ್ರಶಸ್ತಿಗೆ ಪುರಸ್ಕೃತರಾದ ಖ್ಯಾತ ಸಾಹಿತಿ ಎನ್.ಜಿ. ಮಹದೇವಪ್ಪ ಹಾಗೂ ನಿವೃತ್ತ ಪ್ರಾಧ್ಯಾಪಕ ವೀರಣ್ಣ ರಾಜೂರ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ ಮುಡಿಗುಂಡ ವಿರಕ್ತ ಮಠದ ಡಾ. ಶ್ರೀಕಂಠ ಸ್ವಾಮೀಜಿ, ಶೇಗುಣಸಿ ವಿರಕ್ತ ಮಠದ ಡಾ. ಮಹಾಂತಪ್ರಭು ಸ್ವಾಮೀಜಿ, ಮಹಾರಾಷ್ಟ್ರ ರಾಜ್ಯ ಘಟಕದ ಜಾಗತಿಕ ಲಿಂಗಾಯತ ಮಹಾಸಭೆಯ ಸಂಚಾಲಕಿ ಸರಳಾತಾಯಿ ಪಾಟೀಲ ಉಪಸ್ಥಿತರಿದ್ದರು.
ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳು :
೧. ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು, ಶಿವಮೊಗ್ಗದ ಪ್ರೀಡಂ ಪಾರ್ಕನ್ನು ಅಲ್ಲಮಪ್ರಭು ಉದ್ಯಾನವನ ಎಂದು ಕಿತ್ತೂರು ತಾಲೂಕನ್ನು ಚೆನ್ನಮ್ಮನ ಕಿತ್ತೂರು ತಾಲೂಕು ಎಂದು ಘೋಷಿಸಿದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹಾಗೂ ಸಚಿವ ಸಂಪುಟದ ಸದಸ್ಯರನ್ನು ಅಭಿನಂದಿಸಲಾಯಿತು.
೨. ತರೀಕೆರೆಯಲ್ಲಿರುವ ವಿಶ್ವಗುರು ಬಸವಣ್ಣನವರ ಸಹೋದರಿ ಅಕ್ಕನಾಗಮ್ಮ ತಾಯಿಯವರ ಲಿಂಗೈಕ್ಯ ಸ್ಥಳ ಹಾಗೂ ಆ ಪ್ರದೇಶದಲ್ಲಿರುವ ಮಹಾಶರಣ ನುಲಿಯ ಚಂದಯ್ಯ ನವರ ಮತ್ತು ಇತರ ಕಾಯಕ ವರ್ಗದ ಶರಣರ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಯಿತು.
೩. ನ್ಯಾಯಮೂರ್ತಿ ಡಾ. ಮೋಹನ್ ದಾಸ್ ಅವರದಿಯನ್ನು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಈ ಹಿಂದೆ ಶಿಫಾರಸ್ಸು ಮಾಡಿದ್ದು, ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪೂರೈಸಿ ಅನುಷ್ಠಾನಗೊಳಿಸುವ ಕ್ರಮ ಕೈಗೊಳ್ಳಲು ಆಗ್ರಹಿಸಲಾಯಿತು ಮತ್ತು ಇದಕ್ಕೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು ಜಾಗತಿಕ ಲಿಂಗಾಯತ ಮಹಾಸಭಾ ಪೂರೈಸಲು ನಿರ್ಣಯಿಸಲಾಯಿತು.
೪. ಅವಿರಳ ಜ್ಞಾನಿ ಚನ್ನಬಸವೇಶ್ವರರ ಲಿಂಗೈಕ್ಯ ಸ್ಥಳ ಉಳವಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು "ಉಳವಿ ಅಭಿವೃದ್ಧಿ ಪ್ರಾಧಿಕಾರ" ರಚಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಯಿತು.
೫. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ಹೊರರಾಜ್ಯಗಳಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಮಹಿಳಾ ಘಟಕಗಳನ್ನು ಪ್ರಾರಂಭಿಸಲು ಸರ್ವಾನುಮತದಿಂದ ನಿರ್ಣಯಿಸಲಾಯಿತು.